ಭಾನುವಾರ, ಜುಲೈ 18, 2021

ರೈತ ಪರ ಬಿಜೆಪಿ ಸರ್ಕಾರದಿಂದ ತುಂಗಭದ್ರಾ ಜಲಾಶಯದ ಕಾಲುವೆಗಳಿಗೆ ನೀರು ಬಿಡುಗಡೆ : ಅಮರೇಶ ಕರಡಿ

ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ - ರೈತರ ಮೊಗದಲ್ಲಿ ಹರ್ಷ

ಯಡಿಯೂರಪ್ಪ ಸರ್ಕಾರದ ರೈತಪರ ಕಾಳಜಿಯಿಂದ ಎರಡನೇ ವರ್ಷವೂ ಎರಡು ಬೆಳೆಗಳಿಗೆ ನೀರು: ಅಮರೇಶ ಕರಡಿ


ಹೊಸಶಕೆ ನ್ಯೂಸ್-ಕೊಪ್ಪಳ :ಕೊಪ್ಪಳ, ರಾಯಚೂರು, ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಶಾಸಕ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಹಾಗೂ ಸಂಸದ ಸಂಗಣ್ಣ ಕರಡಿ ಅವರು ಪುತ್ರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕಾಡಾ ಅಧ್ಯಕ್ಷ ತಿಪ್ಪೆರುದ್ರಯ್ಯಸ್ವಾಮಿ ಅವರು ನೀರು ಬಿಡುಗಡೆ ಮಾಡಿದರು.

ಭಾನುವಾರ ಮುನಿರಾಬಾದ್ ನ ತುಂಗಭದ್ರಾ ಜಲಾಶಯಕ್ಕೆ ರೈತರು, ಗಣ್ಯರೊಂದಿಗೆ ಪೂಜೆ ಸಲ್ಲಿಸಲಾಯಿತು. ತುಂಗಭದ್ರಾ ಜಲಾಶಯ 115ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು. 18  ರಿಂದ ವಿವಿಧ ಕಾಲುವೆಗಳಿಗೆ  ನ. 30 ರವರೆಗೆ ಜಲಾಶಯದಿಂದ ನೀರು ಹರಿಸುವದಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.

ಬಳಿಕ ಮಾತನಾಡಿದ ಕೆಡಿಪಿ ಸದಸ್ಯ ಅಮರೇಶ ಕರಡಿ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಜಲಾಶಯದಿಂದ ಎರಡನೇ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ, ತುಂಗಭದ್ರಾ ಜಲಾಶಯವು  ತ್ರೀವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ, ಬಿಜೆಪಿ ಸರ್ಕಾರ ರೈತರ ಪರವಾಗಿರುವದರಿಂದ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ದೃಢನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

 

ರೈತರ ಹಿತದೃಷ್ಠಿಯಿಂದ ಸರ್ಕಾರ ಕಾಲುವೆಗಳಿಗೆ ನೀರು ಹರಿಸುತ್ತಿದ್ದು, ಜಲಾಶಯದ ವಿವಿಧ ಕಾಲುವೆಗಳಿಂದ ಹರಿವು ನೀರಿನ ಸದುಪಯೋಗವಾಗಬೇಕು, ನಮ್ಮ ಪ್ರದೇಶ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಬೇಕು ಅದಕ್ಕೆ ಅನುಷ್ಠಾನದಲ್ಲಿರುವ ವಿವಿಧ ನೀರಾವರಿ ಯೋಜನೆಗಳಿಗೆ ಸರ್ಕಾರ ಚಾಲನೆ ನೀಡಿದೆ ಎಂದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೆರುದ್ರಯ್ಯಸ್ವಾಮಿ ಮಾತನಾಡಿ ತುಂಗಭದ್ರಾ ಜಲಾಶಯ ನಮ್ಮೆಲ್ಲರ ಜೀವನಾಡಿಯಾಗಿದ್ದು, ಜಲಾಶಯದಿಂದ ನೀರು ಹರಿಸುತ್ತಿರುವದರಿಂದ ರೈತರು ತುಂಬಾ ಸಂತಸಗೊಂಡಿದ್ದು, ನೀರನ ಸದ್ಬಳಕೆಯಾಗಬೇಕು, ಪ್ರಸ್ತುತ ಮುಂಗಾರು ಹಂಗಾಮು ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಹಾಂತೇಶ ಬಿ. ಪಾಟೀಲ ಪಾಲಕ್ಷಪ್ಪ ಗುಂಗಾಡಿ, ಬಾಲಚಂದ್ರನ್ ಮುನಿರಾಬಾದ್, ಬಸವರಾಜ ಭೋವಿ, ಪ್ರದೀಪ ಹಿಟ್ನಾಳ,  ಬಸವರಾಜ ಕರ್ಕಿಹಳ್ಳಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ದೇವರ ಕೃಪೆಯಿಂದ ಮಳೆಯು ಚೆನ್ನಾಗಿ ಬರುತ್ತಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಅದರಲ್ಲಿಯೂ ಕೆಳಭಾಗದ ರೈತರಿಗೆ ನೀರು ತಲುಪಬೇಕು, ಐಸಿಸಿಐ ಸಭೆಯ ತೀರ್ಮಾನದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು  ಮುಖ್ಯವಾಗಿರುತ್ತದೆ : ಅಮರೇಶ ಕರಡಿ, ಕೆಡಿಪಿ ಸದಸ್ಯರು, ಕೊಪ್ಪಳ

=================================

ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಎಡದಂಡೆ ಮುಖ್ಯ ಕಾಲುವೆಗೆ ಜು. 18 ರಿಂದ 4100 ಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1130 ಕ್ಯೂ., ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯೂ. ನಂತೆ ನವೆಂಬರ್ 30 ರವರೆಗೆ,  ರಾಯ ಬಸವ ಕಾಲುವೆಗೆ ಜೂನ್ 1ರಿಂದ ಡಿಸೆಂಬರ್ 10 ರವರೆಗೆ 235 ಕ್ಯೂ., ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 18 ರಿಂದ 25 ಕ್ಯೂ.ನಂತೆ ನವೆಂಬರ್ 30 ರವರೆಗೆ ನೀರು ಹರಿಸಲಾಗುತ್ತದೆ

==============================

ಶುಕ್ರವಾರ, ಜೂನ್ 4, 2021

ಅಬಕಾರಿ ಇಲಾಖೆ ಕಾರ್ಯಾಚರಣೆ : ಕೊಪ್ಪಳ ಜಿಲ್ಲೆಯಲ್ಲಿ ರೂ. 1.40 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತುಗಳ ಜಪ್ತಿ

ಕೊಪ್ಪಳ ಅಬಕಾರಿ ಇಲಾಖೆ ಅಧಿಕಾರಿಗಳಿಂದ ರೂ. 1.40 ಕೋಟಿ ಮೊತ್ತದ ಅಕ್ರಮ ಮದ್ಯ, ಮಾದಕ ವಸ್ತು ಜಪ್ತಿ

-     ಗಂಗಾವತಿ ವಲಯದ ಎರಡು ಸಿಎಲ್-7 ಸನ್ನದುಗಳ ಅಮಾನತ್ತು ||

-     ಏಪ್ರಿಲ್ 23 ರಿಂದ ಜೂನ್ 3 ವರೆಗೆ 45  ಕಡೆ ದಾಳಿ || ಮೂವರು ಆರೋಪಿಗಳ ಬಂಧನ  ||

ಹೊಸಶಕೆ ನ್ಯೂಸ್-ಕೊಪ್ಪಳ :

ಕೊಪ್ಪಳ ಜಿಲ್ಲೆಯಲ್ಲಿ ಏಪ್ರಿಲ್ 23 ರಿಂದ ಜೂನ್ 03 ರವರೆಗೆ 45 ಕಡೆಗಳಲ್ಲಿ ದಾಳಿ ಮಾಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ರೂ. 1 ಕೋಟಿ, 40 ಲಕ್ಷದ 56 ಸಾವಿರದ 197 ರೂಪಾಯಿಗಳ (ರೂ. 1,40,86,197) ಮೌಲ್ಯದ ವಿವಿಧ ಮಾದರಿಯ ಅಬಕಾರಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 

 ಇದರಲ್ಲಿ 16 ಘೋರ, 7 ಬಿಎಲ್ಸಿ ಹಾಗೂ 15() ಅಡಿ 24 ಸೇರಿದಂತೆ ಒಟ್ಟು 47 ಪ್ರಕರಣಗಳನ್ನು ದಾಖಲಿಸಿ, ದಾಳಿ ಸಂದರ್ಭ 8 ವಾಹನಗಳು, 15069.390 ಲೀ. ಮದ್ಯ, 44.340 ಲೀ ಬಿಯರ್, 5 ಲೀ ಐಡಿ ಮತ್ತು 40,000 ಲೀ ಮದ್ಯಸಾರವನ್ನು ಜಪ್ತಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಂದು ಅಬಕಾರಿ ಉಪ ಆಯುಕ್ತರಾದ ಸಿ.ಸೇಲಿನಾ ಅವರು ತಿಳಿಸಿರುವರು.

 ಅಧಿಕಾರಿಗಳು ನಡೆಸಿರುವ ದಾಳಿ ಸಂದರ್ಭದಲ್ಲಿ 8 ವಾಹನಗಳು, 15069.390 ಲೀ. ಮದ್ಯ, 44.340 ಲೀ ಬಿಯರ್, 5 ಲೀ ಐಡಿ ಮತ್ತು 40,000 ಲೀ ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ ಲಾಕ್ಡೌನ್ ಅವಧಿಯಲ್ಲಿ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿ ಅನುಸಾರ ಗಂಗಾವತಿ ವಲಯದ 2 ಸಿಎಲ್-7 ಸನ್ನದುಗಳನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಮೇ 24 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯದ ಲಭ್ಯತೆಯ ಕೊರತೆಯಿಂದ ಪಾನೀಕರು ಹಾಗೂ ವ್ಯಸನಿಗಳು ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ, ಸ್ಯಾನಿಟೈಸರ್, ವಾರ್ನಿಶ್ ನಂತಹ ರಾಸಾಯನಿಕ ವಸ್ತುಗಳನ್ನು ಸೇವನೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

 ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಕೆ ಇತರೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸುವದಾಗಿ ತಿಳಿಸಿರುವ ಅವರು, ಸಾರ್ವಜನಿಕರಿಗೆ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಪರ್ಕದ ನಂಬರ್ ಗಳನ್ನು ಮಾಹಿತಿಗಾಗಿ ಪ್ರಕಟಿಸಿರುವರು.

ಅಬಕಾರಿ ಇಲಾಖೆ ಅಧಿಕಾರಿಗಳ ಮಾಹಿತಿ : ಸಿ.ಸೇಲಿನಾ, ಅಬಕಾರಿ ಉಪ ಆಯುಕ್ತರು - 9449597170, ಯಮನೂರಸಾಬ ಹೊಸಮನಿ,  ಕೊಪ್ಪಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು (ಪ್ರಭಾರಿ)- 9449597175, ಸ್ವತಂತ್ರಕುಮಾರ, ಅಬಕಾರಿ ನಿರೀಕ್ಷಕರು ವಿಚಕ್ಷಣ ದಳ - 9591795689, ರಮೇಶ ಅಗಡಿ, ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕ - 7675114929, ಅಜೇಯ್ ಉಮದಿ, ಗಂಗಾವತಿ ವಲಯದ ಅಬಕಾರಿ ನಿರೀಕ್ಷಕ- 9740394078, ಚಾಂದಪಾಷಾ, ಕುಷ್ಟಗಿ ವಲಯದ ಅಬಕಾರಿ ನಿರೀಕ್ಷಕ -9845947828 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ

==

ಕೋವಿಡ್-19 ಹಿನ್ನೆಲೆಯಲ್ಲಿ ಮೇ 17 ರಿಂದ ಜೂನ್ 07 ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಧದ ಭಾ.. ಸನ್ನದುಗಳನ್ನು ಇಲಾಖಾ ಸೀಲಿನಿಂದ ಸೀಲು ಮಾಡಿ ಬಂದ್ ಮಾಡಿಸಲಾಗಿರುತ್ತದೆ.              
: ಸಿ.ಸೇಲಿನಾ, ಅಬಕಾರಿ ಉಪ ಆಯುಕ್ತರು. ಕೊಪ್ಪಳ ಜಿಲ್ಲೆ.

======================================================

ಗುರುವಾರ, ಮೇ 27, 2021

ಗಿಣಿಗೇರಾ ಕೆರೆ ಅಭಿವೃದ್ಧಿ, ಪುನಃಶ್ಚೇತನ ಕಾಮಗಾರಿಗೆ ರೂ. 3 ಕೋಟಿ ಅನುದಾನ ಬಿಡುಗಡೆ-ಕೆಡಿಪಿ ಸದಸ್ಯ ಅಮರೇಶ ಕರಡಿ ಸಂತಸ

 ಕೆರೆ ಪುನಶ್ಚೇತನ ಕಾಮಗಾರಿಗೆ ಸರ್ಕಾರದ ಸ್ಪಂದನೆ ಕೆಡಿಪಿ ಸದಸ್ಯ ಅಮರೇಶ ಕರಡಿ ಸಂತಸ

ಗಿಣಿಗೇರಾ ಕೆರೆ ಅಭಿವೃದ್ಧಿ, ಪುನಃಶ್ಚೇತನ ಕಾಮಗಾರಿಗೆ ರೂ. 3 ಕೋಟಿ ಅನುದಾನ ಬಿಡುಗಡೆ

 ಹೊಸಶಕೆ ನ್ಯೂಸ್ -ಕೊಪ್ಪಳ :

ಅಭಿನವ ಶ್ರೀಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಗಿಣಗೇರಾ ಗ್ರಾಮ ಕೆರೆ ಅಭಿವೃದ್ಧಿ ಸೇವಾ ಟ್ರಸ್ಟ್(ರಿ) ಹಾಗೂ ಜನ-ಸಮುದಾಯದ ಸಹಭಾಗಿತ್ವದಲ್ಲಿ ನಡೆದಿರುವ ಗಿಣಿಗೇರಾ ಕೆರೆ ಅಭಿವೃದ್ಧಿ, ಪುನಃಶ್ಚೇತನ ಕಾರ್ಯಕ್ಕೆ ರಾಜ್ಯ ಸರ್ಕಾರವು ರೂ. 3 ಕೋಟಿ ಅನುದಾನವನ್ನು ಅನುದಾನವನ್ನು ನೀಡಿರುವದು ಸಂತಸವನ್ನು ತಂದಿದೆ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ತಿಳಿಸಿದ್ದಾರೆ.

 ಕೆರೆಯ ಅಭಿವೃದ್ಧಿಗೆ ಮಂಜೂರಿಯಾಗಿದ್ದ ಅನುದಾನವನ್ನು ಕೋವಿಡ್ -19 ಸಂಕಷ್ಟ ಪರಿಸ್ಥಿತಿಯ ಹಿನ್ನಲೇಯಲ್ಲಿ ಸರ್ಕಾರವು ಸಣ್ಣ ನೀರಾವರಿ ಇಲಾಖೆಯಲ್ಲಿನ ಕಳೆದ ಆರ್ಥಿಕ ವರ್ಷದಲ್ಲಿ ಉಳಿಕೆಯಾಗಿರುವ ಅನುದಾನದಲ್ಲಿ ಪ್ರಸ್ತುತ ಮೂರರ ಒಂದರಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು, ಕೆರೆಯ ಅಭಿವೃದ್ಧಿಗಾಗಿ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿರುವದರಿಂದ ಇಲಾಖೆಯು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ.

 

ಕೆರೆಯ ಕಾಯಕಲ್ಪ, ಅಂತರ್ಜಲವೃದ್ಧಿಗಾಗಿ ಪೂಜ್ಯರು ನಡೆಸಿರುವ ಕೆರೆಗಳ ಜೀರ್ಣೋದ್ಧಾರ ಕಾಯಕವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಸಂಸದ ಸಂಗಣ್ಣ ಕರಡಿ ಮತ್ತು  ಈ ಭಾಗದ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಮತ್ತು ಜಿಲ್ಲಾ ಉಸ್ತುವಾರಿ ಸಚಿವರು  ಪೂಜ್ಯರ ಆಶೆಯದಂತೆ ಕೆರೆಯ ಪುನಃಶ್ಚೇತನ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆಯು ಸಿಕ್ಕಿದೆ ಎಂದಿದ್ದಾರ

 

ಸರ್ಕಾರದ ಕಾರ್ಯದರ್ಶಿಗಳು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಇವರು ಗಿಣಿಗೇರಾ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯ ಇಂಜನೀಯರ್ ಸಣ್ಣ ನೀರಾವರಿ ಇಲಾಖೆ ಉತ್ತರ ವಲಯ ವಿಜಯಪುರ ಇವರು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿ ಕಾಮಗಾರಿಯನ್ನು 2019-20ನೇ ಸಾಲಿನ ಲೆಕ್ಕಶೀರ್ಷಿಕೆ 4702-00-101-1-07-139 ಕೆರೆಗಳ ಆಧುನೀಕರಣ –ಪ್ರಧಾನ ಕಾಮಗಾರಿಗಳು ರಡಿ ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಿದ್ದಾರೆ.

 ಅಭಿನವ ಶ್ರೀಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದಿರುವ ಅಂತರ್ಜಲ ಮತ್ತು ಕೆರೆಯ ಸಂರಕ್ಷಣೆ, ಪುನಃಶ್ಚೇತನ ಕಾರ್ಯವು ಇಡೀ ರಾಷ್ಟ್ರಕ್ಕೆ ಮಾದರಿಯಾಗಲಿದ್ದು, ಕೆರೆಯ ಕಾಯಕಲ್ಪಕ್ಕೆ ಅನುಮೋದಿತ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿರುವದಕ್ಕೆ ಸಂತಸವಾಗಿದೆ

ಈಗಾಗಲೇ ಸಿದ್ಧಪಡಿಸಲಾಗಿರುವ ಪ್ರಸ್ತಾವನೆಯಂತೆ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕೊಪ್ಪಳದ ಗಿಣಿಗೇರಾ ಕೆರೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ, ಅಂತರ್ಜಲವೃದ್ಧಿ, ಕೆರೆಯ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರಿ ಮಾಡಿರುವ ಸರ್ಕಾರಕ್ಕೆ  ಧನ್ಯವಾದಗಳು : ಅಮರೇಶ ಕರಡಿ, ಕೆಡಿಪಿ ಸದಸ್ಯರು, ಕೊಪ್ಪಳ.

====